Sunday, May 20, 2012

Kuruba Gowda Deity - ಚಿಂಚಲಿ ಮಾಯಕ್ಕದೇವಿ

ಹಾಲಹಳ್ಳ:
ಹಾಲಹಳ್ಳ ಚಿಂಚಲಿ ಗ್ರಾಮದ ಹತ್ತಿರ ಅರ್ಧ ಕಿ.ಮೀ. ಅಂತರದಲ್ಲಿದೆ. ಪಶ್ಚಿಮಕ್ಕೆ ಹರಿದು ಕ್ರಷ್ಣಾನದಿಯನ್ನು ಕೂಡಿಕೊಳ್ಳುತ್ತದೆ. ಮಾಯಕ್ಕನ ಮುಖ್ಯ ಐತಿಹ್ಯಗಳಲ್ಲಿ ಇದು ಒಂದು. ಈ ಹಳ್ಳಕ್ಕೆ ಹಾಲಹಳ್ಳ ಎಂದು ಹೆಸರು ಬರಲು ಕಾರಣವಾದ ಕಥೆಯನ್ನು ಜನರು ತಿಳಿಸುತ್ತಾರೆ. ಮಾಯಕ್ಕ ಊರ ಹೊರಗಿನ ಹಳ್ಳದ ಹತ್ತಿರ ಹೋದಳಂತೆ. ಕುರುಬರು ಕುರಿಕಾಯುತಿದ್ದರಂತೆ. ತನಗೆ ಹಾಲು ಬೇಕೆಂದು ಕೇಳಿದಾಗ ಅವರು ಕೊಡಲಿಲ್ಲವಂತೆ. ಶಕ್ತಿಯಿಂದ ಹಳ್ಳವೆಲ್ಲವೂ ಹಾಲಾಗಿ ಹರಿಯಲಿ ಎಂದಳಂತೆ. ಆಗ ಹಳ್ಳವೆಲ್ಲ ಹಾಲಾಗಿ ಹರಿಯಿತಂತೆ. ಅದಕ್ಕೆಂದೇ ಅದಕ್ಕೆ ಹಾಲಹಳ್ಳವೆಂದು ಹೆಸರು ಬಂತು ಎಂಬ ಕಥೆ ಇದೆ.
ಮಾಯಕ್ಕನ ಪೂಜೆಗೆ ನೀರು ಹಾಲಹಳ್ಳದಿಂದಲೆ ತರಲಾಗುತ್ತದೆ. ಕಾರಹುಣ್ಣಿಮೆ, ನೂಲುಹುಣ್ಣಿಮೆಗಳಲ್ಲಿ ಕುದುರೆ, ಪಲ್ಲಕ್ಕಿ ಹಾಲಹಳ್ಳದಲ್ಲಿ ಹೋಗಿ ಮಾಯಕ್ಕ ಅಲ್ಲಿ ಸ್ನಾನ ಮಾಡುವಳೆಂಬ ನಂಬಿಕೆಯಿದೆ.ಆಗ ಪಲ್ಲಕ್ಕಿ, ಕುದುರೆ, ಭಕ್ತರು ಹಾಲಹಳ್ಳಕ್ಕೆ ಹೋಗುತ್ತಾರೆ. ದೇವಿಯ ಹರಕೆ ಸೇವೆಗನ್ನು ಸಲ್ಲಿಸುವ ಭಕ್ತರು ಹಾಲಹಳ್ಳದ ಸ್ನಾನದಿಂದಲೆ ಆರಂಭಿಸುತ್ತಾರೆ. ಹಾಲಹಳ್ಳ ದಡದಲ್ಲಿ ಉಟ್ಟಿಗೆ ಉಡುವ ಹರಕೆಯನ್ನು ಜನರು ಸಲ್ಲಿಸುತ್ತಾರೆ. ಪಕ್ಕದಲ್ಲಿಯೇ ಕೃಷ್ಣಾನದಿ ಹರಿಯುತ್ತಿದ್ದರು ಮಾಯಕ್ಕನ ಸಂಬಂಧ ಹೆಚ್ಚಾಗಿ ಹಾಲಹಳ್ಳಕ್ಕೆ ಅಂಟಿಕೊಂಡಿದೆ.
ಕೀಲಕಟ್ಟಿ:

 
ಚಿಂಚಲಿ ಗ್ರಾಮದಲ್ಲಿ ಕಂಡು ಬರುವ ಅತಿ ಮುಖ್ಯ ಐತಿಹ್ಯವಾಗಿದೆ. "ಕೀಲ" ಮತ್ತು "ಕಟ್ಟ"ರೆಂಬ ರಾಕ್ಷಸರನ್ನು ಮಾಯಕ್ಕ ಚಿಂಚಲಿಯಲ್ಲಿ ಸಂಹಾರ ಮಾಡಿದಳಂತೆ. ಅವರ ಸಮಾಧಿ ಸ್ಥಳಗಳಿವು. ಈಗಲೂ ಕಂಡು ಬರುವ ಕೀಲಕಟ್ಟಿಗಳು ಊರ ಮಧ್ಯದಲ್ಲೊಂದು ಹಾಗೂ ಊರ ಆಚೆ ಒಂದು ಇದೆ. ಅವುಗಳನ್ನು ಒಳಗಿನ ಕಿಲಕಟ್ಟಿ ಹೊರಗಿನ ಕಿಲಕಟ್ಟಿ ಎಂದು ಕರೆಯುವ ವಾಡಿಕೆ ಇದೆ. ಪ್ರತಿ ಕಿಲಕಟ್ಟಿಯು ವಿಶಾಲವಾದ ಪ್ರಾಂಗಣವನ್ನು ಒಳಗೊಂಡಿವೆ. ಮಧ್ಯದಲ್ಲಿ ಚೌಕಾಕಾರದ ಪೂಜಾ ಸ್ಥಳ ಕಂಡು ಬರುತ್ತದೆ. ಅಲ್ಲಿ ಎರಡು ಚಿಕ್ಕ ಮಣ್ಣಿನ ದಿಣ್ಣೆಗಳನ್ನು ಕಾಣಬಹುದು. ಆ ಮಣ್ಣಿನ ಚಿಕ್ಕ ದಿಣ್ಣೆಗಳನ್ನು ಕೆಳಗೆ ವಿಶಾಲವಾದ ಮಣ್ಣಿನ ಹರಿವೆಗಳಿವೆ(ಹಗೆಗಳು). ಆ ತಗ್ಗುಗಳಲ್ಲಿ ಸುಮಾರು ಮೂರನಾಲ್ಕು ಚೀಲಗಳಷ್ಟು ಧಾನ್ಯ ತುಂಬಬಹುದು. ಯಾವಾಗಲು ಅವುಗಳ ಒಳಗೆ ಗುಂಡು ಕಲ್ಲುಗಳನ್ನು ತುಂಬಿ ಬಾಯಿ ಮುಚ್ಚಿ ಅದರ ಮೇಲೆ ಮಣ್ಣಿನ ಚಿಕ್ಕ ದಿಣ್ಣೆಗಳನ್ನು ಮಾಡಿ ಮೇಲೆ ಪೂಜಿಸಲಾಗುತ್ತದೆ.ಮೇಲೆ ಭಂಡಾರವನ್ನು ಹಾಕಲಾಗಿರುತ್ತದೆ. ೩ ವರ್ಷಗಳಿಗೊಮ್ಮೆ ನಡೆಯುವ ಕೀಲಕಟ್ಟರ ಜಾತ್ರೆಯಲ್ಲಿ ಬಾಯಿ ತೆರೆಯಲಾಗುತ್ತದೆ.
ಉಣ್ಣಿ ಮಟ್ಟೆಪ್ಪನ ಕಲ್ಲು:

 
ಹಾಲಹಳ್ಳದ ದಂಡೆಯ ಮೇಲೆ ದಿಣ್ಣೆಯ ಮೇಲೆ ಉಣ್ಣಿ ಮಟ್ಟೆಪ್ಪನ ಕಲ್ಲುಗಳನ್ನು ಈಗಲೂ ನೋಡಬಹುದು. ಈ ಐತಿಹ್ಯಕ್ಕೆ ಒಂದು ಕಥೆ ಕೇಳಿಬರುತ್ತದೆ.ಹಳ್ಳದ ದಡದಲ್ಲಿ ಕುರಿಕಾಯುತಿದ್ದ ಕುರುಬರಲ್ಲಿ ಕುರಿಯ ಉಣ್ಣೆ ಕೊಡುವಂತೆ ಕೇಳಿದಾಗ ಅವರು ಕೊಡಲಿಲ್ಲವಂತೆ.ಆಗ ಸಿಟ್ಟಿನಿಂದ ಮಾಯಕ್ಕ ಕುರಿಗಳೆಲ್ಲ ಕಲ್ಲಾಗಲಿ ಎಂದು ಶಾಪ ನಿಡಿದಳಂತೆ. ಕುರಿಗಳೆಲ್ಲ ಕಲ್ಲಾಗಿ ಬಿದ್ದವಂತೆ.ಹಾಲಹಳ್ಳದ ದಡದಲ್ಲಿ ಗುಂಪಾಗಿ ಬಿದ್ದ ಕಲ್ಲುಗಳಿಗೆ ಉಣ್ಣಿ ಮಟ್ಟೆಪ್ಪನ ಕಲ್ಲು ಎಂದು ಹೆಸರು ಬಂದಿತಂತೆ. ಪಲ್ಲಕ್ಕಿ ಹಳ್ಳಕ್ಕೆ ಬಂದಾಗ ಕುರುಬರು ಉಣ್ಣಿಯನ್ನು ತಂದು ಒಪ್ಪಿಸುತ್ತಾರೆ. ಅಂತಹ ಕಲ್ಲುಗಳು ಸುತ್ತ ಮುತ್ತ ಎಲ್ಲಿಯೂ ಕಂಡು ಬರುವುದಿಲ್ಲ. ಈ ಐತಿಹ್ಯ ಕುರುಬರಿಗೂ ಮಾಯಕ್ಕನಿಗೂ ನಿಕಟ ಸಂಬಂಧವನ್ನು ಕಲ್ಪಿಸುತ್ತದೆ.

ಗುಡ್ಡತಾಯಿ:
ಈ ಐತಿಹ್ಯ ಗ್ರಾಮದ ಉತ್ತರಕ್ಕೆ ಕಂಡು ಬರುತ್ತದೆ. ಗ್ರಾಮದಿಂದ ಒಂದು ಕಿ.ಮೀ. ದೂರವಾಗಬಹುದು. ಸಣ್ಣ ಗುಡ್ಡವಿದ್ದು ಅಲ್ಲೊಂದು ಚಿಕ್ಕ ಗುಡಿಯಿದೆ. ಅದರಲ್ಲಿ ಇರುವ ದೇವರನ್ನು ಮಾಯಕ್ಕನೆಂದೇ ಕರೆಯುತ್ತಾರೆ. ದಸರೆಯ ಬನ್ನಿ ಮುರಿಯುವ ಸಂದರ್ಭದಲ್ಲಿ ಕುದುರೆ, ಪಲ್ಲಕ್ಕಿ ಈ ಸ್ಥಳಕ್ಕೆ ಬರುತ್ತವೆ.

ಬಂಗಾರದ ಗಿಡ:
ಊರ ಹೊರಗೆ ಪೂರ್ವಕ್ಕೆ ಒಂದು ಕಿ.ಮೀ. ಅಂತರದಲ್ಲಿ ಇರುವ ಗುಂಪು ಮರಗಳು ತಾಣವೇ ಬಂಗಾರದ ಗಿಡ. ಇಲ್ಲಿ ಪಶ್ಚಿಮಕ್ಕೆ ಮುಖಮಾಡಿದ ಚಿಕ್ಕ ಮಾಯಕ್ಕನ ಗುಡಿ ಕಂಡು ಬರುತ್ತದೆ. ದಸರೆಯ ಬಣ್ಣಿ ಹಬ್ಬಕ್ಕೆ ಇದಕ್ಕೂ ಪ್ರಾಮುಖ್ಯತೆ ಇದೆ. ಜನರು ಇಲ್ಲಿಂದಾ ಬನ್ನಿಯನ್ನು ಬಂಗಾರವೆಂದು ಸ್ವಿಕರಿಸುವುದರಿಂದ ಬಂಗಾರದ ಗಿಡ ಎಂಬ ಹೆಸರು ಈ ಸ್ಥಳಕ್ಕೆ ಬಂದಿರುವ ಸಾಧ್ಯತೆ ಇದೆ. ಮಳೆ ಕಡಿಮೆಯಾದಾಗ ಮಳೆಬರಲು ಬಂಗಾರ ಗಿಡದ ಜಾತ್ರೆ ಮಾಡಿದರೆ ಮಳೆಯಾಗುತ್ತದೆಂಬ ನಂಬಿಕೆ ಹಿರಿಯರಲ್ಲಿದೆ. ಈಗಲೂ ಬಂಗಾರ ಗಿಡದ ಜಾತ್ರೆ ನಡೆಯುತ್ತಿದ್ದರೂ ಅದಕ್ಕೆ ನಿಶ್ಚಿತ ದಿನಾಂಕಗಳು ಇಲ್ಲ. ಭಕ್ತರೆಲ್ಲ ಕೂಡಿದಾಗ ಮಂಗಳವಾರ, ರವಿವಾರ, ಶುಕ್ರವಾರ ಹೀಗೆ ಯಾವಗಲಾದರೂ ಜಾತ್ರೆ ಮಾಡುವುದುಂಟು. ಕಣಿ ಹೇಳುವುದು, ಡೊಳ್ಳಿನ ಪದ ಹಾಡುವುದು ಹಾಗೂ ಮಾಯಕ್ಕನ ಉಡಿ ತುಂಬುವ ಕಾರ್ಯಕ್ರಮದ ಜೊತೆಗೆ ಮಹಾ ಪ್ರಸಾದ ವ್ಯವಸ್ಥೆಯಾಗಿರುತ್ತದೆ.
 
From the website

2 comments: